ಅತಿಮಾನವ (Overman)

ಫ್ರೆಡರಿಕ್ ನೀಷೆ ತುಂಬಾ ಆಳವಾದ ಚಿಂತನೆಗಳಲ್ಲಿ ತೊಡಗಿಕೊಳ್ಳುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. ಏಕಾಂತದಲ್ಲಿದ್ದಾಗ ತನಗೆ ತಾನೇ ಕೆಲವು ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದರು. 
  • ಜನರು ತಾವು ಸೃಷ್ಟಿಸಿರದ ನಿಯಮಗಳನ್ನು ಏಕೆ ಅನುಸರಿಸುತ್ತಾರೆ?

  • ಜನರು ವಿಭಿನ್ನವಾಗಿ ಬದುಕಲು ಏಕೆ ಭಯ ಪಡುತ್ತಾರೆ?

  • ನಿಜವಾಗಿ, ಜೀವನದಲ್ಲಿ ಬದುಕಲು ಪ್ರೇರೇಪಿಸುವುದಾದರೂ ಏನು?

ನೀಷೆ ತನ್ನ ಸುತ್ತಲಿನ ಜನರೆಲ್ಲಾ ಅದೇ ಕೆಲಸವನ್ನು ಪದೇಪದೇ ಮಾಡುವುದನ್ನು ನೋಡಿದ: ಶಾಲೆಗೆ ಹೋಗುವುದು, ಆದೇಶಗಳನ್ನು ಪಾಲಿಸುವುದು, ಪ್ರಾರ್ಥನೆ ಮಾಡುವುದು, ಕೆಲಸಕ್ಕೆ ಹೋಗುವುದು, ಮಲಗುವುದು. ಅದರಲ್ಲಿ ಹೆಚ್ಚಿನ ಜನ "ಏಕೆ" ಎಂಬ ಪ್ರಶ್ನೆ ಜೀವನದಲ್ಲಿ ಎಂದಿಗೂ ಕೇಳುವುದಿಲ್ಲ. ಅವರೂ ತಮ್ಮ ಸುತ್ತಮುತ್ತಲಿನ ಜನರನ್ನು ಕುರಿಯ ಹಿಂಡಿನಂತೆ ಅನುಸರಿಸುತ್ತಾರೆ. 

ಆದರೆ ನೀಷೆ “ಇನ್ನೂ ಕುರಿಗಳಾಗುವುದು ಬೇಡ. ನಮಗೆ ಸಿಂಹಗಳು ಬೇಕು. ನಮಗೆ ಸೃಷ್ಟಿಕರ್ತರು ಬೇಕು. ನಮಗೆ ಧೈರ್ಯವಾಗಿ ಜೀವನವನ್ನು ಸ್ವತಂತ್ರವಾಗಿ ಬದುಕುವವರು ಬೇಕು.” ಎಂದು ಹೇಳಿದರು.

ಹೀಗಾಗಿ ಅವರು ಹೊಸ ರೀತಿಯ ಮಾನವನ ಕಲ್ಪನೆಯನ್ನು ಕೊಟ್ಟರು.
ಇತರರನ್ನು ನಕಲಿ ಮಾಡದೇ, ಸೃಷ್ಟಿಸುವ,
ಆಜ್ಞೆಗಳನ್ನು ಪಾಲಿಸದೆ, ಯೋಚಿಸುವ, ಹೊಸ ರೀತಿಯ ಮಾನವ.

ನೀಷೆ ಅವನನ್ನು ಅತಿಮಾನವ (Overman) ಎಂದು ಕರೆದರು.


ಅತಿಮಾನವ ಎಂದರೇನು?

ಅತಿಮಾನವ (ಅಥವಾ ಜರ್ಮನ್ ನಲ್ಲಿ Übermensch) ಹೊಳೆಯುವ ಕಣ್ಣುಗಳುಳ್ಳ ಹಾರುವ ಶಕ್ತಿಯುಳ್ಳ ಉದ್ದನೆಯ ಪರದೆ ಕಟ್ಟಿಕೊಂಡ ಅಪಾರ ಶಕ್ತಿಗಳುಳ್ಳ ಮಾನವನಲ್ಲ.

ಅತಿಮಾನವ ಎಂದರೆ ಒಂದು ಶ್ರೇಷ್ಠ ಕಲ್ಪನೆ: ಒಬ್ಬ ಮಾನವ, ತನ್ನ ಹಳೆಯ ಮಿತಿಗಳನ್ನು ಮೀರಿ, ತನ್ನದೇ ಸ್ವಂತ ಬದುಕುವ ಮಾರ್ಗ ಕಂಡುಕೊಂಡು, ತಾನು ನಿಜವಾಗಿ ಏರಬೇಕಾದ ಸ್ಥಿತಿಯನ್ನು ಮುಟ್ಟಿ - ಮಾನವತ್ವವನ್ನು ಮೀರಿ ಬೆಳೆಯುವುದು.

ಅತಿಮಾನವ "ನಾನು ಏನು ಮಾಡಬೇಕು?" ಎಂದು ಕೇಳುವುದಿಲ್ಲ.
ಅವನು, “ನಾನು ಏನು ಸೃಷ್ಟಿಸಬಲ್ಲೆ?” ಎಂದು ಕೇಳಿಕೊಳ್ಳುತ್ತಾನೆ.

ಅತಿಮಾನವ, ತಾನು ಹಣದಿಂದಲೋ, ಅಧಿಕಾರದಿಂದಲೋ ಶ್ರೇಷ್ಠನಲ್ಲ ಇತರರಿಗಿಂತ ಉತ್ತಮನಾದವನಲ್ಲ. ಅವನು ಉತ್ತಮ ಏಕೆಂದರೆ, ಜಗತ್ತು ಅರ್ಥ ಮಾಡಿಕೊಳ್ಳದೆ ಹೋದರೂ, ತಾನು ಸಂಪೂರ್ಣವಾಗಿ ತನ್ನದೇ ರೀತಿಯಲ್ಲಿ ಬದುಕುವ ಧೈರ್ಯ ಹೊಂದಿರುವ ಕಾರಣದಿಂದ.

ಇವನು ತಾನು ಸಮಾಜದಲ್ಲಿ ಒಂದಾಗಲು ಪ್ರಯತ್ನಿಸುವುದಿಲ್ಲ. ಸಮಾಜದಿಂದ ಮೇಲೇರಲು ಪ್ರಯತ್ನಿಸುತ್ತಾನೆ.


ಮೂರು ರೂಪಾಂತರಗಳು – ಒಂಟೆ, ಸಿಂಹ, ಮಗು 

ನೀಷೆ ಹೇಳುವಂತೆ ನೀವು ಅತಿಮಾನವರಾಗಬೇಕಾದರೆ, ಮೂರು ಹಂತಗಳಲ್ಲಿ ರೂಪಾಂತರವಾಗಬೇಕು—ಮೂರು ಪ್ರಾಣಿಗಳಂತೆ.

1. ಒಂಟೆ:

ಒಂಟೆ ಶಕ್ತಿಯುತ ಪ್ರಾಣಿಯಾದರೂ ಶಾಂತವಾಗಿರುತ್ತದೆ. ಅತಿಯಾದ ಭಾರ ಹೊರುತ್ತದೆ. ಈ ರೀತಿಯ ಮಾನವ ಎಲ್ಲಾ ಆದೇಶಗಳನ್ನು ಪಾಲಿಸುತ್ತಾನೆ. ಎಲ್ಲಾ ಸಂಪ್ರದಾಯಗಳನ್ನು ಪಾಲಿಸುತ್ತಾನೆ. ನಾನು ಇವುಗಳನ್ನೆಲ್ಲಾ ಮಾಡಬೇಕು ಎಂದು ನಂಬುತ್ತಾನೆ.

ಈ ಸ್ಥಿತಿಯಲ್ಲಿನ ಮಾನವ ಇತರರಿಂದ ಕಂಡುಕೊಂಡ ಮೌಲ್ಯಗಳನ್ನು ಪಾಲಿಸುತ್ತಾರೆ. ಎಲ್ಲರಿಗೂ ಒಳ್ಳೆಯವರಾಗಿ ನಡೆದುಕೊಳ್ಳುತ್ತಾರೆ. ಪ್ರಶ್ನೆಗಳನ್ನು ಕೇಳುವುದಿಲ್ಲ. ಹೇಳಿದ್ದನ್ನೆಲ್ಲ ನಂಬುತ್ತಾರೆ.

ಒಂಟೆಯ ಜೀವನ ಕಷ್ಟಕರ. ಆದರೆ ಅದೇ ಪ್ರಾರಂಭ.

2. ಸಿಂಹ:

ಒಂದು ದಿನ ಒಂಟೆ “ಇಲ್ಲ!” ಎನ್ನುತ್ತದೆ, ಹಾಗೂ ಸಿಂಹವಾಗುತ್ತದೆ. ಈ ಸಿಂಹವು "ನೀನು ಮಾಡಲೇಬೇಕು" ಎನ್ನುವ ರಾಕ್ಷಸರನ್ನು ಎದುರಿಸಿ ನಿಲ್ಲುತ್ತದೆ. ರಾಕ್ಷಸರು ಇವನೆಡೆಗೆ ಕಿರುಚಿ ನಿಯಮಗಳನ್ನು ಹೇಳುತ್ತಾರೆ.

  • “ನೀನು ಆಜ್ಞೆ ಪಾಲಿಸಲೇಬೇಕು!”

  • “ನೀನು ನಂಬಲೇಬೇಕು!”

  • “ನೀನು ಎಲ್ಲರಂತೆಯೇ ಬದುಕಬೇಕು!”

“ಸಾಧ್ಯವಿಲ್ಲ” ಎಂದು ಸಿಂಹ ಘರ್ಜಿಸಿ ಹೇಳುತ್ತದೆ. ಇಲ್ಲ ಎಂದು ಹೇಳುವುದನ್ನು ಕಲಿಯುತ್ತದೆ.

ಆದರೆ ಹೊಡೆದಾಡುವುದಷ್ಟೇ ಸಾಲದು.

3. ಮಗು:

ಕೊನೆಗೆ, ಸಿಂಹ ಮಗುವಾಗುತ್ತದೆ. ದುರ್ಬಲ ಮಗುವಲ್ಲ. ದಡ್ಡ ಮಗುವಲ್ಲ. ಸ್ವತಂತ್ರ ಮಗು. ಮಗು ಜೀವನಕ್ಕೆ "ಹೌದು" ಎನ್ನುತ್ತದೆ. ಅದು ಸೃಷ್ಟಿಸುತ್ತದೆ, ಆಡುತ್ತದೆ, ನಗುತ್ತದೆ. ಕಲ್ಪಿಸಿಕೊಳ್ಳುತ್ತದೆ.

ಅತಿಮಾನವ ಎಂದರೆ ಈ ಮಗು. ಹಗುರವಾದ ಮಗು. ಹೊಸ ಶಕ್ತಿ ಮತ್ತು ಆನಂದದಿಂದ ತುಂಬಿದ ಮಗು.


ಅತಿಮಾನವ ಏಕೆ ಬೇಕು

ಪ್ರಾಮಾಣಿಕವಾಗಿ ಹೇಳುವುದಾದರೆ, ಹೆಚ್ಚಿನ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಒಂಟಿಯಾಗಿರುವುದರ ಭಯ. ತಪ್ಪಾಗಿ ಬದುಕುವ ಭಯ. ವಿಭಿನ್ನವಾಗಿ ಬದುಕಲು ಭಯ.

ಆದ್ದರಿಂದ ಅವರು ಜನಸಂದಣಿಯೊಳಗೆ ತಲೆಮರೆಸಿಕೊಂಡು ಬದುಕುತ್ತಾರೆ. ಅವರು ಶಿಕ್ಷಕರು, ತಂದೆ-ತಾಯಿ, ರಾಜಕೀಯ ಅಥವಾ ಧಾರ್ಮಿಕ ನಾಯಕರು ಮತ್ತು ಸಮಾಜ ಹೇಳುವುದನ್ನು ಅನುಸರಿಸುತ್ತಾರೆ - ಅದು ಸರಿಯಿಲ್ಲದಿದ್ದರೂ ಸಹ.

ನೀಷೆ ಇದನ್ನು ನೋಡಿ "ಜನರು ಬದುಕುತ್ತಿಲ್ಲ. ಅವರು ನಿದ್ರಿಸುತ್ತಿದ್ದಾರೆ. ಅವರು ನಕಲುಗಳ ನಕಲುಗಳು" ಎಂದು ಹೇಳಿದರು.

ಯಾರಾದರೂ ಮೊದಲು ಮುನ್ನುಗ್ಗಲು ಧೈರ್ಯ ಮಾಡದ ಹೊರತು ಜಗತ್ತು ಬೆಳೆಯಲು ಸಾಧ್ಯವಿಲ್ಲದ ಕಾರಣ ಅತಿಮಾನವನ ಅಗತ್ಯವಿದೆ.

ಅತಿಮಾನವ ಆರಂಭದಲ್ಲಿ ಏಕಾಂಗಿಯಾಗಿ ನಡೆಯುತ್ತಾನೆ, ಆದರೆ ನಂತರ, ಇತರರು ಅವನು ಮಾಡಿದ ಹೊಸ ಮಾರ್ಗವನ್ನು ಅನುಸರಿಸುತ್ತಾರೆ.

ಅವನು ಅರಸನಂತಲ್ಲ. ಅವನು ಸಂತನಂತೆಯೂ ಅಲ್ಲ.
ಅವನು ಹೊಸ ಜೀವನದ ಬೀಜಗಳನ್ನು ನೆಟ್ಟ ತೋಟಗಾರನಂತೆ..

ದೇವರು ಸತ್ತಿದ್ದಾನೆ—ಆದರೆ ಅದು ಚಿಂತಿಸುವ ವಿಷಯವಲ್ಲ

ನೀಷೆಯವರ ಅತ್ಯಂತ ಪ್ರಸಿದ್ಧ ವಿಚಾರವೆಂದರೆ: “ದೇವರು ಸತ್ತಿದ್ದಾನೆ.”

ಜನರು ಅದನ್ನು ಕೇಳಿ ಭಯಭೀತರಾದರು. ಆದರೆ ನೀಷೆ ಈ ಮಾತನ್ನು ದುರಹಂಕಾರದಿಂದಾಗಲೀ ಕ್ರೌರ್ಯದಿಂದಾಗಲೀ ಹೇಳಲಿಲ್ಲ.

ಅವರು ಹೇಳಿದ ಮಾತಿನ ಅರ್ಥ: ಜನರು ಯೋಚಿಸದೆ ಅನುಸರಿಸುತ್ತಿದ್ದ ಹಳೆಯ ನಂಬಿಕೆಗಳು ತಮ್ಮ ಶಕ್ತಿಯನ್ನು ಕಳೆದುಕೊಂಡಿವೆ.

ತಾನು ತನ್ನ ಜೀವನದಲ್ಲಿ ಏನು ಮಾಡಬೇಕೆಂಬುದು ಎಂಬುದನ್ನು ಮೇಲಿರುವ ದೇವರು ಹೇಳುತ್ತಾನೆ ಎಂದು ಜನರು ನಂಬಿದ್ದರು. ಆದರೆ ಬಹಳ ಜನ ಇಂತಹ ವಿಚಾರಗಳನ್ನು ಮನಸ್ಸಿನಿಂದ ನಂಬುವುದಿಲ್ಲ- ಆದರೆ ನಂಬಿದಂತೆ, ಅದರ ಪ್ರಕಾರ ನಡೆಯುವಂತೆ ನಟನೆ ಮಾಡುತ್ತಾರೆ. 

ಆದ್ದರಿಂದ ಈ ಪ್ರಶ್ನೆಗಳನ್ನು ಕೇಳಿದರು:

  • ನಮಗೆ ಜೀವನದಲ್ಲಿ ಏನು ಮಾಡಬೇಕು ಎಂದು ಹೇಳುವ ದೇವರು ಮೇಲೆ ಇಲ್ಲದಿದ್ದರೆ..
  • ನಾವು ನಿಜವಾಗಿಯೂ ಸ್ವತಂತ್ರರೇ ಆಗಿದ್ದರೆ...

ಹಾಗಾದರೆ ಆ ಸ್ವಾತಂತ್ರ್ಯವನ್ನು ಇಟ್ಟುಕೊಂಡು ನಾವು ಏನು ಮಾಡಬೇಕು?

ದೇವರು ಹೋದ ಎಂದು ಅತಿಮಾನವ ಅಳುವುದಿಲ್ಲ.

"ಹಾಗಾದರೆ ಇನ್ನು ನಾನು ನನ್ನ ಸ್ವಂತ ಬೆಳಕಾಗಬೇಕು." ಎಂದು ಅತಿಮಾನವ ಹೇಳುತ್ತಾನೆ.


ಅತಿಮಾನವ ಜೀವನದಿಂದ ತಪ್ಪಿಸಿಕೊಳ್ಳುವುದಿಲ್ಲ - ಜೀವನವನ್ನು ಅಪ್ಪಿಕೊಳ್ಳುತ್ತಾನೆ.

ಕೆಲವರು ಜೀವನದಿಂದಲೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ - ಹೇಡಿಗಳಂತೆ.
ಅವರು ಹೇಳುವಂತೆ " ಈ ಲೋಕ ಕೆಟ್ಟದ್ದು, ನಾನು ಸ್ವರ್ಗಕ್ಕೆ ಹೋಗಬೇಕು" ಎನ್ನುತ್ತಾರೆ. ಆಥವಾ "ಜೀವನದಲ್ಲಿ ಕೇವಲ ನೋವು ತುಂಬಿದೆ, ನಾನು ಇದರಿಂದ ತಪ್ಪಿಸಿಕೊಳ್ಳಬೇಕು" ಎನ್ನುತ್ತಾರೆ.

ನೀಷೆ ಹೇಳುವ ಪ್ರಕಾರ ಅದು ಬದುಕುವ ವಿಧಾನವಲ್ಲ, ಶರಣಾಗುವ ವಿಧಾನ.

ಅತಿಮಾನವ ನೋವಿನಿಂದ ಓಡಿ ಹೋಗುವುದಿಲ್ಲ. ಅದನ್ನು ಬಳಸಿಕೊಳ್ಳುತ್ತಾನೆ. ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ- ಬೇಸರವನ್ನು ಸಂಗೀತವನ್ನಾಗಿ, ಸೋಲನ್ನು ಜ್ಞಾನವನ್ನಾಗಿ ಪರಿವರ್ತಿಸುತ್ತಾನೆ.

ಅತಿಮಾನವ ಹೀಗೆ ಹೇಳುತ್ತಾನೆ:

  • “ಇದೇ ನನ್ನ ಜೀವನ”

  • “ಇದೇ ನನ್ನ ಪರ್ವತ”

  • “ನಾನು ಬಿದ್ದರೂ ಸಹ, ಇದನ್ನು ಹತ್ತಿಯೇ ಹತ್ತುತ್ತೇನೆ”

ಅವನು ಜೀವನವನ್ನು ಎಷ್ಟು ಪ್ರೀತಿವನೆಂದರೆ, ಅವನು ಅದೇ ಜೀವನವನ್ನು ಮತ್ತೆ, ಮತ್ತೆ, ಮತ್ತೆ ಜೀವಿಸಲು ಇಷ್ಟ ಪಡುವಂತೆ. ತಾನು ಮಾಡಿದ ಅವೇ ತಪ್ಪುಗಳನ್ನು ಸೇರಿಸಿಕೊಂಡು ಮತ್ತೆ ಬದುಕಲು ಇಷ್ಟಪಡುತ್ತಾನೆ.

ಇದನ್ನೇ ನೀಷೆ "ಶಾಶ್ವತ ಪುನರಾಗಮನ" ಎನ್ನುತ್ತಾರೆ - ಜೀವನವನ್ನು ಎಷ್ಟು ಪ್ರೀತಿಸುವುದೆಂದರೆ ಅದರಲ್ಲಿ ಬರುವ ಪ್ರತಿಯೊಂದನ್ನು ಪ್ರೀತಿಸುವುದು, ಅಪ್ಪಿಕೊಳ್ಳುವುದು.


ನಿಜವಾದ ಶಕ್ತಿ ಒಳಗಿನಿಂದ ಬರುತ್ತದೆ

ಅನೇಕ ಜನ ಶಕ್ತಿ ಎಂದರೆ ಎತ್ತರದ ಕಟ್ಟುಮಸ್ತಾದ ದೇಹ ಹೊಂದಿರುವುದು ಅಥವಾ ಇತರರ ಮೇಲೆ ಹಿಡಿತ ಸಾಧಿಸುವುದು ಎಂದು ಭಾವಿಸುತ್ತಾರೆ.

ಆದರೆ, ಅತಿಮಾನವ ಬೇರೆಯದೇ ರೀತಿಯ ಶಕ್ತಿಯನ್ನು ಪ್ರದರ್ಶಿಸುತ್ತಾನೆ.

  • ಇತರರು ಕ್ರೂರವಾಗಿ ವರ್ತಿಸಿದಾಗ ಕ್ಷಮಿಸುತ್ತಾನೆ.

  • ಜೀವನದಲ್ಲಿ ತಪ್ಪುಗಳು ಸಂಭವಿಸಿದಾಗ ನಗುತ್ತಾನೆ.

  • ಅವನಿಗೆ ಜೀವನದಲ್ಲಿ ಇತರರ ಚಪ್ಪಾಳೆಯ ಅಗತ್ಯವಿಲ್ಲ.

  • ಅವನು ಒಬ್ಬಂಟಿಯಾಗಿದ್ದಾಗ ಕುಗ್ಗುವುದಿಲ್ಲ.

  • ಅವನು ಕಷ್ಟದ ಸಮಯದಲ್ಲೂ ಸಹ ಪ್ರಾಮಾಣಿಕತೆಯಿಂದ ಬದುಕುತ್ತಾನೆ.

ಚಂಡಮಾರುತಕ್ಕೆ ಸಿಕ್ಕ ಒಂದು ಮರದಂತೆ. ಗಾಳಿ ಅಲುಗಾಡಿಸಬಹುದು. ಆದರೆ ಬೀಳಿಸಲಾಗದು. ಕಾರಣ, ಅದರ ಬೇರುಗಳು ಅಷ್ಟು ಆಳಕ್ಕೆ ಹೋಗಿರುತ್ತವೆ.

ಅತಿಮಾನವನೂ ಅದೇ ರೀತಿ- ಆಳ-ಶಾಂತ-ಗಟ್ಟಿ ಸ್ವಭಾವದವನು.


ಅತಿಮಾನವನಾಗುವುದು ಒಂದು ಮಾರ್ಗ, ಗೆಲುವಲ್ಲ.

ನೀವು ಒಂದು ದಿನ ಎಚ್ಚರಗೊಂಡು "ನಾನೀಗ ಅತಿಮಾನವ!" ಎಂದು ಕೂಗುವುದಿಲ್ಲ. ಹಾಗಂದುಕೊಂಡರೆ ನೀವು ತಪ್ಪು ಬಾವಿಸಿದ್ದೀರಿ. ನೀವು ಒಂದು ವಾದ್ಯ ನುಡಿಸಲು ಕಲಿಯುವಂತೆ, ಉತ್ತಮ ಕಲಾವಿದನಾಗುವಂತೆ ಕ್ರಮೇಣ ಕ್ರಮೇಣವಾಗಿ ಅತಿಮಾನವನಾಗುತ್ತೀರಿ.

ನೀವು ಪ್ರತಿ ಬಾರಿ ಹೇಳಿದಾಗ:

  • “ನನಗೆ ನಾನೇ ಯೋಚಿಸುತ್ತೇನೆ”

  • “ನನ್ನ ಭಯವನ್ನು ನಾನೇ ಎದುರಿಸುತ್ತೇನೆ”

  • “ಬೇರೆಯವರನ್ನು ಮೆಚ್ಚಿಸಲು ನಾನು ಸುಳ್ಳು ಹೇಳುವುದಿಲ್ಲ”

…ನೀವು ಅತಿಮಾನವನಿಗೆ ಒಂದು ಹೆಜ್ಜೆ ಹತ್ತಿರವಾದಂತೆ.

ಅತಿಮಾನವ  ಯಾವುದೋ ದೂರದ ವ್ಯಕ್ತಿಯಲ್ಲ. ಅವನು ನಿಮ್ಮೊಳಗಿನ ಒಂದು ಸಾಧ್ಯತೆ.

ಆದರೆ ನೀವು ಅವನನ್ನು ಆರಿಸಿಕೊಳ್ಳಬೇಕು. ಒಂದು ಬಾರಿ ಅಲ್ಲ. ಪ್ರತಿದಿನ.


ಅತಿಮಾನವನ ಕಣ್ಣುಗಳ ಮೂಲಕ ಜಗತ್ತು ಹೇಗೆ ಕಾಣುತ್ತದೆ

ಅತಿಮಾನವ ಪ್ರಪಂಚದಲ್ಲಿ ವಿಭಿನ್ನವಾಗಿ ನಡೆಯುತ್ತಾನೆ.

ಇತರರು ನಿಯಮಗಳನ್ನು ನೋಡುವಲ್ಲಿ, ಅವನು ಬೆಳೆಯುವ ಅವಕಾಶಗಳನ್ನು ನೋಡುತ್ತಾನೆ.

ಇತರರು ನೋವನ್ನು ನೋಡುವಲ್ಲಿ, ಅವನು ಕಲಿಯುವ ಅವಕಾಶ ನೋಡುತ್ತಾನೆ.

ಇತರರು ಕತ್ತಲೆಯನ್ನು ನೋಡುವ ಸ್ಥಳದಲ್ಲಿ, ಅವನು "ನಾನು ಬೆಳಕನ್ನು ತರುತ್ತೇನೆ" ಎಂದು ಹೇಳುತ್ತಾನೆ.

ಅವನು ಇತರರನ್ನು ನಿಯಂತ್ರಿಸಲು ಪ್ರಯತ್ನಿಸುವುದಿಲ್ಲ. ಅವನು ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ.

ಅವನು ಅಪರಾಧಿ ಪ್ರಜ್ಞೆ ಅಥವಾ ನಾಚಿಕೆಯಲ್ಲಿ ಸಿಲುಕಿಕೊಳ್ಳುವುದಿಲ್ಲ. ಅವನು "ನಾನು ಕಲಿಯುತ್ತಿದ್ದೇನೆ" ಎಂದು ಹೇಳುತ್ತಾನೆ.

ಅವನು ಪ್ರಭಾವ ಬೀರಲು ಬಯಸುವುದಿಲ್ಲ. ಅವನು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಯಸುತ್ತಾನೆ.

ಅವನಿಗೆ ಸಾವಿನ ಭಯವಿಲ್ಲ. ಅವನು ನಕಲಿಯಾಗಿ ಬದುಕಲು ಹೆದರುತ್ತಾನೆ.

ಇವೆಲ್ಲವುಗಳೂ ಅತಿಮಾನವನನ್ನು ತುಂಬಾ ಅಪರೂಪ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತವೆ.


ನೀವು ಅತಿಮಾನವರಾಗಬಹುದೇ?

ಹೌದು.

ಆದರೆ ಅದಕ್ಕೆ ಪ್ರಾಮಾಣಿಕತೆ. ಧೈರ್ಯ ಮತ್ತು ಪ್ರೀತಿ ಬೇಕು.

ನಿಮ್ಮ ದಿನಚರಿ;

  • ಕಠಿಣ ಪ್ರಶ್ನೆಗಳನ್ನು ಕೇಳಿ.

  • ನಿಮ್ಮ ಭಯಗಳನ್ನು ಎದುರಿಸಿ.

  • ಒಬ್ಬಂಟಿಯಾಗಿ ನಡೆಯಲು ಸಿದ್ದರಾಗಿ. 

  • ವೈಫಲ್ಯಗಳಿಂದ ಕಲಿಯಿರಿ.

  • ನಿಮ್ಮ ಸ್ವಂತ ಮೌಲ್ಯಗಳನ್ನು ನಿರ್ಮಿಸಿಕೊಳ್ಳಿ.

  • ನಿಮ್ಮನ್ನು ಕ್ಷಮಿಸಿಕೊಳ್ಳಿ.

  • ಆಳವಾಗಿ ನಗುವುದು ರೂಡಿಸಿಕೊಳ್ಳಿ.

  • ದೈರ್ಯದಿಂದ ರಚಿಸಿ.

  • ಸಂಪೂರ್ಣವಾಗಿ ಜೀವಿಸಿ.

ನೀವು ಈಗಲೇ ಪ್ರಾರಂಭಿಸಬಹುದು.

ನಿಮಗೆ ಅನುಮತಿಯ ಅಗತ್ಯವಿಲ್ಲ. ನೀವು ಕಾಯುವ ಅಗತ್ಯವಿಲ್ಲ.

ಅತಿಮಾನವ ಬೇರೆಯವನಲ್ಲ. ನೀವು ಬೆಳೆಯುತ್ತಲೇ ಇದ್ದರೆ, ಕೇಳುತ್ತಲೇ ಇದ್ದರೆ ಮತ್ತು ನೀವು ನಿಜವಾಗಿಯೂ ನೀವೇ ಆಗುತ್ತಿದ್ದರೆ - ಅದು ನಿಮ್ಮ ಭವಿಷ್ಯದ ಆವೃತ್ತಿಯಾಗಿದೆ.

ಒಂದು ದಿನ, ಯಾರಾದರೂ ನಿಮ್ಮನ್ನು ನೋಡಿ, "ನೀವು ನಿಜವಾಗಿಯೂ ನೀವೇ ಆಗುವ ಮೂಲಕ ಜಗತ್ತನ್ನು ಬದಲಾಯಿಸಿದ್ದೀರಿ" ಎಂದು ಹೇಳಬಹುದು.

ಆಗ ನೀವು ನಗುತ್ತೀರಿ, ಅವರು ನಿಮ್ಮನ್ನು ಹೊಗಳುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ ಅವರು ಹೇಳಿದ್ದು ಸತ್ಯ ಎಂಬುದರ ಅರಿವು ನಿಮಗಿರುವುದರಿಂದ.

Comments

Popular posts from this blog

ಪರಿಚಯ - ಫ್ರೆಡರಿಕ್ ನೀಷೆ ಯಾರು?

The Death of God - ದೇವರು ಸತ್ತ ಸುದ್ದಿ